ಚಕ್ಕುಲಿ ಜಾಗರಣೆ

ನಾವೆಲ್ಲರೂ ಜೀವನದಲ್ಲಿ ಬಹಳಷ್ಟು ಸಲ ಜಾಗರಣೆ ಮಾಡಿರುತ್ತೇವೆ. ಶಿವರಾತ್ರಿಗೋ, ಯಾವುದೋ ಕಾರ್ಯಕ್ರಮಕ್ಕೋ ಅಥವಾ ಪರೀಕ್ಷೆಗಂತೂ ಈ ಪೀಳಿಗೆಯ ವಿದ್ಯಾರ್ಥಿಗಳು ಜಾಗರಣೆ ಮಾಡೇ ಮಾಡಿರುತ್ತೇವೆ. ಹೀಗೊಂದು ಜಾಗರಣೆ ಮಾಡುತ್ತಾ ನನಗೆ ನನ್ನ ಮೊದಲ ಜಾಗರಣೆಯ ಅನುಭವ ನೆನಪಾಗುತ್ತಿದೆ. ಅದರ ಬಗ್ಗೆ ಹಂಚಿಕೊಂಡು ನಗೋಣ ಅನಿಸುತ್ತಿದೆ.

ಆಗ ನಾನು ನನ್ನ ಪದವಿ ಪೂರ್ವದ ಮೊದಲ ವರ್ಷದಲ್ಲಿ ಇದ್ದೆ. ಮೊದಲ ಬಾರಿ ಅಪ್ಪ ಅಮ್ಮನಿಂದ ದೂರ ಇದ್ದು, ಹಾಸ್ಟೆಲ್ ವಾಸದಲ್ಲಿ ಇದ್ದೆ. ಶನಿವಾರ ಬಂದಿದ್ದೆ ತಡ ಊರಲಿದ್ದ ಅಜ್ಜಿ ಮನೆಗೆ ಓಡುತ್ತಿದ್ದೆ. ಹೀಗೆ ಒಂದು ಸಲ ಹೋದಾಗ ನಮ್ಮ ದೊಡ್ಡಪ್ಪನ ಮಗ ಯಕ್ಷಗಾನ ಉತ್ಸಾಹಿ, ನನ್ನ ಯಕ್ಷಗಾನ ನೋಡೋದಕ್ಕೆ ಹೋಗೋಣ  ಅಂತ ಕರೆದ. ನಾನು ಯಾವತ್ತು ಯಕ್ಷಗಾನ ನೋಡಿರಲಿಲ್ಲ, ಬಿಸಿ ರಕ್ತ ಬೇರೆ, ಹೂಂ ಅಂದೆ.   

ಮಂದಾರ್ತಿ ಮೇಳದ ಜೋಡಿ ಆಟ ಇತ್ತು, ‘ಗದಾಯುದ್ಧ’ ಪ್ರಸಂಗ. ನಾನು ಬೇರೆ ಭೀಮನ ಅಭಿಮಾನಿ. ಪೂರ್ತಿ ಹುರುಪಲ್ಲಿ ನೋಡೋದಕ್ಕೆ ಶುರು ಮಾಡಿದೆ. ಪ್ರಾರ್ಥನೆ ಆಯ್ತು, ಎರಡೂ ಕಡೆಯವರು ತಿರುಗಿ ತಿರುಗಿ ನೆಗೆದದ್ದೇನು! ಭಾಗವತರು ತಾವೇನು ಕಮ್ಮಿ ಎಂಬಂತೆ ಸ್ಪರ್ಧೆ ಕೊಡುತ್ತಿದ್ದರು. ಜೀವನದಲ್ಲಿ ಮೊದಲನೆಯ ಸಲ ನನಗೆ ಅವರ ಪದ ಅರ್ಥವೂ ಆಯ್ತು. ಏನೋ ಸಾಧನೆ ಮಾಡಿದಂತೆ ಬೀಗಿ ಹೋಗಿದ್ದೆ. 

ಸುಮಾರು ಹನ್ನೆರಡು ಘಂಟೆಯಾಗಿರಬಹುದು. ಕಣ್ಣೇ ಕಿತ್ತು ಬರುವಷ್ಟು ನಿದ್ದೆ ಬರೋದಕ್ಕೆ ಶುರುವಾಯಿತು. ನಾನು ತಡೆದುಕೊಳ್ಳುವಷ್ಟು ತಡೆದುಕೊಂಡೆ, ಆಗಲಿಲ್ಲ. ಅಣ್ಣನ ಮೊರೆ ಹೋದೆ ಕೊನೆಗೆ. ಅಲ್ಲೇ ಹೊರಗೆ ಮಾರುತಿದ್ದ ಅರ್ಧ ಚಹಾ ಕೊಡಿಸಿದ. ಅದಂತೂ ಅರ್ಧ ಲೋಟ ಸಕ್ಕರೆಗೆ ಒಂದು ಚೂರು ಬಿಸಿನೀರು ಹಾಕಿ, ಒಂದೆರಡು ಗುಟುಕು ನಿಜವಾದ  ಚಹಾ ಸಿಂಪಡಿಸಿದ ಹಾಗೆ ಇತ್ತು. ನಿದ್ದೆ ಜಾಸ್ತಿ ಆಯಿತು. ಆಮೇಲೆ ನನ್ನಣ್ಣ ಒಂದು ಉಪಾಯ ಮಾಡಿದ. ಒಂದು ಪಟ್ಟಣ ಪುಟ್ಟ ಚಕ್ಕುಲಿ ತಗೊಂಡ. ಎರಡೇ ಎರಡು ಚಕ್ಕುಲಿ ಕೊಟ್ಟ. ಅದರ ರುಚಿಗೋ, ಕರ್ರುಂ ಕುರ್ರುಂ ಸದ್ದಿಗೋ ಗೊತ್ತಿಲ್ಲ, ಎಚ್ಚರ ಆಯಿತು.

ಹೀಗೆ ನಿದ್ದೆ ಬಂದಾಗೆಲ್ಲಾ ಎರಡೆರಡು ಚಕ್ಕುಲಿ ತಿಂದು ಏಳುತಿದ್ದೆ. ಎರಡಕ್ಕಿಂತ ಜಾಸ್ತಿ ಸಿಗುತ್ತಿರಲಿಲ್ಲ. ನೀರಲ್ಲಿ ಮುಳುಗುತ್ತಿದ್ದವನು ಮೇಲೆ ಬಂದು ಒಂದು ಉಸಿರು ತೆಗೆದು ಕೆಳಗೆ ಹೋದಂತೆ ಭಾಸವಾಗುತಿತ್ತು. ಸಾಧಾರಣ ಐದು ಘಂಟೆ ಆಗಿರಬಹುದು. ಕುರುಕ್ಷೇತ್ರ ಯುದ್ಧವೂ ಪ್ರಾರಂಭವಾಗಿತ್ತು. ಆದರೆ ನಮ್ಮ ಚಕ್ಕುಲಿ ಪಟ್ಟಣ ಖಾಲಿಯಾಗಿತ್ತು. ಈಗ ನಿದ್ರಾದೇವಿಯ ತಡೆಯುವ ಶಕ್ತಿ ಯಾರಿಗೂ ಇರಲಿಲ್ಲ. ಅಣ್ಣನಿಗೂ ನನ್ನ ಸ್ತಿಥಿ ನೋಡಲಾಗಲಿಲ್ಲ. ಸರಿ ಮಲಗು ಎಂದ. ನನ್ನ ಪಾಲಿಗೆ ಅದೇ ಕೊನೆಯ ದೃಶ್ಯವಾಯಿತು. ಯುದ್ಧ ತಪ್ಪಿ ಹೋಯಿತು!!  

ಕುಟ್ಟಿ ಕುಂದಾಪುರ ಹೋದಂಗೆ ನಾನು ಗದಾಯುದ್ಧ ಪ್ರಸಂಗಕ್ಕೆ ಹೋಗಿ, ಗದಾಯುದ್ಧವನ್ನೇ ನೋಡಲಿಲ್ಲ. ಆದರು ಮೊದಲ ಸಲ ನಿದ್ದೆ ಬಿಟ್ಟ ಹೆಮ್ಮೆ ಇದ್ದೇ ಇತ್ತು ಮರುದಿನ. ಅಣ್ಣನಿಗೂ ಒಳ್ಳೆಯ ಹಾಸ್ಯ ಸಿಕ್ಕಿತ್ತು. ಈ ಅನುಭವ ನೆನಪು ಮಾಡಿಕೊಂಡಾಗೆಲ್ಲಾ ನಗು ಬರುತ್ತದೆ. ಈಗಲೂ ಕೆಲವೊಮ್ಮೆ ನಿದ್ದೆ ಬಿಡಬೇಕಾಗಿ ಬಂದಾಗ ಈ ಚಕ್ಕುಲಿ ಉಪಾಯ ಮಾಡುತ್ತೇನೆ. ಇವತ್ತೂ ಅಷ್ಟೇ ನನ್ನ ಪಕ್ಕದಲ್ಲೇ ಕಡ್ಲೇಕಾಯಿ ಇಟ್ಟುಕೊಂಡು ನಾಲ್ಕು ನಾಲ್ಕೇ ತಿಂತಾ ಇದ್ದೀನಿ!!